News

ಕೋವಿಡ್ ಸೋಂಕಿತರಿಗೆ ಆಯುರ್ವೇದ ಔಷಧಿ ‘ಆಯುಷ್ 64’ ಮಾರುಕಟ್ಟೆಗೆ ಬಿಡುಗಡೆ

ಕೋವಿಡ್ ಸೋಂಕಿತ ರೋಗಿಗಳಿಗಾಗಿ ಭಾರತ ಸರಕಾರದ ಆಯುಷ್ ಇಲಾಖೆ ಮತ್ತು ಸೆಂಟ್ರಲ್ ಕೌನ್ಸಿಲ್ ಆಫ್ ರಿಸರ್ಚ್ ಇನ್ ಆಯುರ್ವೇದ ಸಂಶೋಧನೆಯ ಫಲವಾಗಿ ಆಯುಷ್ 64 ಎನ್ನುವ ಔಷಧಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ಕೋವಿಡ್ ಸೋಂಕಿತ ರೋಗಿಗಳಿಗಾಗಿ ಭಾರತ ಸರಕಾರದ ಆಯುಷ್ ಇಲಾಖೆ ಮತ್ತು ಸೆಂಟ್ರಲ್ ಕೌನ್ಸಿಲ್ ಆಫ್ ರಿಸರ್ಚ್ ಇನ್ ಆಯುರ್ವೇದ (ಸಿಸಿಆರ್ ಎಎಸ್) ಸಂಶೋಧನೆಯ ಫಲವಾಗಿ ಹೊರತಂದಿರುವ ಆಯುಷ್ 64 ಎನ್ನುವ ಔಷಧಿ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು ಕರ್ನಾಟಕ ರಾಜ್ಯದಲ್ಲಿ ಮಂಗಳೂರಿನ ವಿವೇಕ್ ಟ್ರೇಡರ್ಸ್ ವತಿಯಿಂದ ವಿತರಣೆ ಮಾಡಲಾಗುತ್ತಿದೆ.

ಈ ಬಗ್ಗೆ ನಗರದ ಕೊಡಿಯಾಲ್ ಬೈಲಿನ ಅಟಲ್ ಸೇವಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವೇಕ್ ಟ್ರೇಡರ್ಸ್ ಪ್ರವರ್ತಕ ನರೇಶ್ ಶೆಣೈ ಮತ್ತು ಆಯುರ್ವೇದ ವೈದ್ಯ ಡಾ.ಹರಿಕೃಷ್ಣ ಪಾಣಾಜೆ ಅವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ.

ಆಯುಷ್ 64 ಔಷಧಿಯನ್ನು ಕರ್ನಾಟಕದಲ್ಲಿ ಪುತ್ತೂರಿನ ಆಯುರ್ವೇದ ಉತ್ಪನ್ನಗಳ ಸಂಸ್ಥೆ ಎಸ್ ಡಿಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ಉತ್ಪಾದಿಸಲು ಅನುಮತಿ ಪಡೆದಿದ್ದು, ಈಗಾಗ್ಲೇ ಉತ್ಪನ್ನಗಳು ರಾಜ್ಯದ ಎಲ್ಲ ಮೆಡಿಕಲ್ ಸ್ಟೋರ್ ಗಳಿಗೆ ಪೂರೈಕೆಯಾಗಿದೆ. ಇಡೀ ದೇಶದಲ್ಲಿ 9 ಕಂಪನಿಗಳಿಗೆ ಮಾತ್ರ ಆಯುಷ್ 64 ಔಷಧಿ ಉತ್ಪಾದನೆಗೆ ಲೈಸನ್ಸ್ ಸಿಕ್ಕಿದೆ. ಅದರಲ್ಲಿ ಪುತ್ತೂರಿನ ಎಸ್ ಡಿಪಿ ಸಂಸ್ಥೆಯೂ ಒಂದು ಎಂದು ನರೇಶ್ ಶೆಣೈ ಮಾಹಿತಿ ನೀಡಿದರು.

ಕೋವಿಡ್ ಪಾಸಿಟಿವ್ ಆದವರು ಈ ಔಷಧಿಯನ್ನು ಪಡೆದು ಸೋಂಕು ಮುಕ್ತರಾಗಿರುವುದನ್ನು ತಜ್ಞರು ದೃಢೀಕರಿಸಿದ್ದಾರೆ. ಕೋವಿಡ್ ಲಕ್ಷಣಗಳು ಇಲ್ಲದ ಸೋಂಕಿತರು ಅಥವಾ ಸಾಮಾನ್ಯ ಲಕ್ಷಣಗಳನ್ನು ಹೊಂದಿದವರು ಈ ಔಷಧಿಯನ್ನು ಪಡೆಯಬಹುದೆಂದು ವೈದ್ಯರು ಶಿಫಾರಸು ಮಾಡಿದ್ದಾರೆ. ಈಗಾಗ್ಲೇ ಗುಜರಾತಿನ ಅಹಮದಾಬಾದ್, ಗಾಂಧಿನಗರ, ವಡೋದರ, ಭಾವನಗರ, ಜುನಾಗಢ, ಸೂರತ್, ನರ್ಮದಾ, ವಲ್ಸಾಡ್ ನ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಆಯುಷ್ 64 ಮಾತ್ರೆಗಳನ್ನು ನೀಡಲಾಗಿದ್ದು, ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ನರೇಶ್ ಶೆಣೈ ಹೇಳಿದರು.

ಅಲ್ಲದೆ, ಆಯುಷ್ 64 ಮಾತ್ರೆ ಸೇವಿಸಿದವರು ಕೋವಿಡ್ ಸೋಂಕಿನ ಅಡ್ಡಪರಿಣಾಮಗಳಾದ ನಿದ್ರಾಹೀನತೆ, ಮಾನಸಿಕ ಒತ್ತಡ, ಆತಂಕ, ಆಯಾಸ ಇನ್ನಿತರ ಅನಾರೋಗ್ಯದಿಂದ ಮುಕ್ತಿ ಹೊಂದಿರುವುದು ಕಂಡುಬಂದಿರುವುದನ್ನು ವೈದ್ಯರು ಪತ್ತೆ ಮಾಡಿದ್ದಾರೆ. ಆಯುಷ್ ಮಾತ್ರೆಗಳನ್ನು ವೈದ್ಯರ ಸಲಹೆಯೊಂದಿಗೆ ಕೋವಿಡ್ ಸೋಂಕಿತರು 14 ದಿನಗಳ ಕಾಲ ತೆಗೆದುಕೊಳ್ಳಬೇಕಾಗುತ್ತದೆ. ಯಾವುದೇ ಲಕ್ಷಣ ಇಲ್ಲದವರು ದಿನಕ್ಕೆ ಎರಡು ಸಲ ಮಾತ್ರೆಯನ್ನು ಬಿಸಿನೀರಿನ ಜೊತೆ ತೆಗೆದುಕೊಳ್ಳಬಹುದು. ಲಕ್ಷಣ ಇದ್ದವರು ದಿನಕ್ಕೆ ಮೂರರಂತೆ ಆಹಾರ ಸೇವಿಸಿದ ಬಳಿಕ ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಹೃದಯ ಕಾಯಿಲೆ, ಮಧುಮೇಹ, ರಕ್ತದೊತ್ತಡ ಕಾಯಿಲೆ ಇದ್ದವರು ಕೂಡ ಈ ಮಾತ್ರೆಗಳನ್ನು ತೆಗೆದುಕೊಳ್ಳಬಹುದು ಎಂದು ಡಾ. ಹರಿಕೃಷ್ಣ ಪಾಣಾಜೆ ತಿಳಿಸಿದ್ದಾರೆ. 

To top